ತ್ರಯಾಃ ಪ್ರಾಜಾಪತ್ಯಾಃ ಪ್ರಜಾಪತೌ ಪಿತರಿ ಬ್ರಹ್ಮಚರ್ಯಮೂಷುಃ; ದೇವಾ ಮನುಷ್ಯಾ ಅಸುರಾಃ. ಉಷಿತ್ವಾ ಬ್ರಹ್ಮಚರ್ಯಂ ದೇವಾ ಊಚುಃ, ಬ್ರವೀತು ನೋ ಭವಾನಿತಿ. ತೇಭ್ಯೋ ಹೈತದಕ್ಷರಮುವಾಚ ದ ಇತಿ, ವ್ಯಜ್ಞಾಸಿಷ್ಟಾ೩ ಇತಿ. ವ್ಯಜ್ಞಾಸಿಷ್ಮೇತಿ ಹೋಚುಃ, ದಾಮ್ಯತೇತಿ ನ ಆತ್ಥೇತಿ. ಓಮಿತಿ ಹೋವಾಚ, ವ್ಯಜ್ಞಾಸಿಷ್ಟೇತಿ ॥1॥
ದೇವತೆಗಳು, ಮನುಷ್ಯರು, ಅಸುರರು ಎಂಬ ಮೂರು ವರ್ಗದ ಪ್ರಜಾಪತಿಯ ಮಕ್ಕಳು ತಮ್ಮ ತಂದೆಯಾದ ಪ್ರಜಾಪತಿಯ ಸಮೀಪದಲ್ಲಿ ಬ್ರಹ್ಮಚರ್ಯ ವ್ರತದಿಂದ ವಾಸ ಮಾಡಿದರು. ಹಾಗೆ ವಾಸ ಮಾಡುತ್ತಾ ಒಂದು ದಿನ ದೇವತೆಗಳು ತಮಗೆ ಉಪದೇಶ ಮಾಡುವಂತೆ ಪ್ರಜಾಪತಿಯನ್ನು ಕೇಳಿಕೊಂಡಾಗ, ಅವನು ದ ಎಂಬ ಒಂದಕ್ಷರವನ್ನು ಮಾತ್ರ ಉಪದೇಶ ಮಾಡಿ, ಅರ್ಥ ಆಯ್ತಾ ಎಂದು ಕೇಳಿದನು. ಆಗ ದೇವತೆಗಳು, ಹೌದು ಅರ್ಥವಾಯ್ತು, ದಾಮ್ಯತ - ದಾಂತರಾಗಿರಿ, ಬಹಿರಿಂದ್ರಿಯಗಳನ್ನು ದಮನ ಮಾಡಿಕೊಳ್ಳಿರಿ, ಸುಖೋಪಭೋಗಗಳಿಗೆ ಕಡಿವಾಣ ಹಾಕಿಕೊಳ್ಳಿರಿ ಅಂತ ತಾನೇ ನೀನು ಉಪದೇಶಿಸುತ್ತಿರುವುದು.. ಎಂದರು. ಪ್ರಜಾಪತಿಯು ಹೌದೆಂದನು.
ಅಥ ಹೈನಂ ಮನುಷ್ಯಾ ಊಚುಃ, ಬ್ರವೀತು ನೋ ಭವಾನಿತಿ. ತೇಭ್ಯೋ ಹೈತದೇವಾಕ್ಷರಮುವಾಚ ದ ಇತಿ, ವ್ಯಜ್ಞಾಸಿಷ್ಟಾ೩ ಇತಿ. ವ್ಯಜ್ಞಾಸಿಷ್ಮೇತಿ ಹೋಚುಃ, ದತ್ತೇತಿ ನ ಆತ್ಥೇತಿ. ಓಮಿತಿ ಹೋವಾಚ, ವ್ಯಜ್ಞಾಸಿಷ್ಟೇತಿ ॥2॥
ಹೀಗೆಯೇ ಮನುಷ್ಯರೂ ತಮಗೆ ಉಪದೇಶ ಮಾಡುವಂತೆ ಪ್ರಜಾಪತಿಯನ್ನು ಕೇಳಿಕೊಂಡಾಗ, ಅವನು ದ ಎಂಬ ಒಂದಕ್ಷರವನ್ನು ಮಾತ್ರ ಉಪದೇಶ ಮಾಡಿ, ಅರ್ಥ ಆಯ್ತಾ ಎಂದು ಕೇಳಿದನು. ಆಗ ಮನುಷ್ಯರು, ಹೌದು ಅರ್ಥವಾಯ್ತು, ದತ್ತ - ದಾನ ಮಾಡಿರಿ, ಜಿಪುಣತನವನ್ನು ಬಿಡಿರಿ, ಕೊಟ್ಟದ್ದು ನಿಮಗೆ ಬಚ್ಚಿಟ್ಟದ್ದು ಪರರಿಗೆ ಅಂತ ತಾನೇ ನೀನು ಉಪದೇಶಿಸುತ್ತಿರುವುದು.. ಎಂದರು. ಪ್ರಜಾಪತಿಯು ಹೌದೆಂದನು.
ಅಥ ಹೈನಮಸುರಾ ಊಚುಃ, ಬ್ರವೀತು ನೋ ಭವಾನಿತಿ. ತೇಭ್ಯೋ ಹೈತದೇವಾಕ್ಷರಮುವಾಚ ದ ಇತಿ, ವ್ಯಜ್ಞಾಸಿಷ್ಟಾ೩ ಇತಿ. ವ್ಯಜ್ಞಾಸಿಷ್ಮೇತಿ ಹೋಚುಃ, ದಯಧ್ವಮಿತಿ ನ ಆತ್ಥೇತಿ. ಓಮಿತಿ ಹೋವಾಚ, ವ್ಯಜ್ಞಾಸಿಷ್ಟೇತಿ.
ಇದೇ ರೀತಿ ಅಸುರರಿಗೆ ದ - ದಯಧ್ವಂ - ದಯೆ ತೋರಿರಿ, ಕ್ರೂರಿಗಳಾಗಬೇಡಿರಿ ಎಂದು ಪ್ರಜಾಪತಿಯು ಉಪದೇಶಿಸಿದನು.
ತದೇತದೇವೈಷಾ ದೈವೀ ವಾಗನುವದತಿ ಸ್ತನಯಿತ್ನುಃ ದ ದ ದ ಇತಿ, ದಾಮ್ಯತ ದತ್ತ ದಯಧ್ವಂ ಇತಿ. ತದೇತತ್ತ್ರಯಂ ಶಿಕ್ಷೇತ್, ದಮಂ ದಾನಂ ದಯಾಂ ಇತಿ ॥3॥
ದಮ, ದಾನ, ದಯೆ ಈ ಮೂರರ ಮಹತ್ತ್ವದ ಬಗೆಗಿನ ಈ ದೈವೀವಾಣಿಯು ಗುಡುಗಿನಂತೆ ಸದಾ ಮೊಳಗುತ್ತಿರುತ್ತದೆ ಆಗಸದಲ್ಲಿ!!! ಕೇಳುವ ಕಿವಿಗಳು ನಮ್ಮದಾಗಬೇಕು ಅಷ್ಟೇ...
ತ್ರಿವಿಧಂ ನರಕಸ್ಯೇದಂ ದ್ವಾರಂ ನಾಶನಮಾತ್ಮನಃ, ಕಾಮಃ ಕ್ರೋಧಸ್ತಥಾ ಲೋಭಃ ತಸ್ಮಾದೇತತ್ತ್ರಯಂ ತ್ಯಜೇತ್ - ಭಗವದ್ಗೀತೆ.
ಕಾಮ, ಕ್ರೋಧ, ಲೋಭ(ದುರಾಸೆ, ಜಿಪುಣತನ) ಈ ಮೂರು, ಕ್ರಮವಾಗಿ ದೇವತೆಗಳು, ಅಸುರರು ಮತ್ತು ಮನುಷ್ಯರ ದುರ್ಗುಣಗಳು. ಇವುಗಳನ್ನು ದಮ, ದಯೆ ಮತ್ತು ದಾನ ವೆಂಬ ಸುಗುಣಗಳಿಂದಲೇ ಗೆಲ್ಲಬೇಕು ಎಂಬುದು ತಾತ್ಪರ್ಯ.
ಹಾಗಾಗಿ ಮನುಷ್ಯರಾದ ನಮಗೆ, ಹಳೆಯ ಪಾಪಗಳನ್ನು ತೊಳೆದುಕೊಳ್ಳಲು ಮತ್ತು ಹೊಸ ಭವಿಷ್ಯವನ್ನು ರೂಪಿಸಿಕೊಳ್ಳಲು ದಾನವೊಂದೇ ಅತ್ಯುತ್ತಮ ಮಾರ್ಗ.
ಎಷ್ಟು ದಾನ ಮಾಡಬೇಕು!?
ಪ್ರತಿ ತಿಂಗಳೂ ನಮ್ಮ ಸಂಪಾದನೆಯ, ಕನಿಷ್ಠ, ದಶಾಂಶ (10%) ವನ್ನಾದರೂ ದಾನ ಮಾಡಬೇಕು.
ಯಾರಿಗೆ ದಾನ ಮಾಡಬೇಕು!?
10% ನ ಒಂದು ಭಾಗವನ್ನು ತಂದೆತಾಯಿಯ ಕೈಯಲ್ಲಿಟ್ಟು ನಮಸ್ಕಾರ ಮಾಡಿ. ಒಂದು ಭಾಗವನ್ನು ನಿಮ್ಮ ಇಷ್ಟದೇವರಿಗೆ ಸಲ್ಲಿಸಿ. ಒಂದು ಭಾಗವನ್ನು ನೀವು ನಡೆದುಕೊಳ್ಳುವ ಗುರುಗಳಿಗೆ ಕಾಣಿಕೆ ಕೊಡಿ. ಒಂದು ಭಾಗವನ್ನು ಕಷ್ಟದಲ್ಲಿರುವವರಿಗೆ, ಆಶ್ರಮಗಳಿಗೆ, ಸಂಘಸಂಸ್ಥೆಗಳಿಗೆ ನೀಡಿ. ಒಂದು ಭಾಗವನ್ನು ವಿದ್ಯಾದಾನ ಮಾಡುತ್ತಿರುವ ಯಾರಿಗಾದರೂ ಕೊಡಿ. ಭಾರತೀಯ ಸೇನೆಗೂ ಕೊಡಿ - A/C ಹೆಸರು: ಆರ್ಮ್‌ಡ್ ವೆಲ್ಫೇರ್ ಫಂಡ್ ಕೆನರಾ ಬ್ಯಾಂಕ್ A/C NO: 90552010165915, IFSC ಕೋಡ್: CNRB0000267. ಒಂದು ಭಾಗವನ್ನು ನಿಮ್ಮ ಸಹಾಯಕರಿಗೂ, ಕೆಲಸದವರಿಗೂ ಖಂಡಿತಾ ಕೊಡಿ.